Tuesday, August 7, 2007

ಕಾವ್ಯಾರ್ಪಣೆ

ಕಾವ್ಯಾರ್ಪಣೆ

ಬಚ್ಚಿಟ್ಟ ಭಾವನೆಗಳ ಹಾಳೆಯ ಮೇಲೆ
ಬಿಚ್ಚಿಡಲು ಸಹಕರಿಸಿದ ಅಕ್ಷರಗಳಿಗೆ
ಪದರಾಶಿಗಳ ಹೊದ್ದು ಮಲಗಿದ ಹಾಳೆಗಳಿಗೆ
ಮಲಗಿ ಮುದುಡಬೇಡ ಎಂದೆಚ್ಚರಿಸುವ ನಾಳೆಗಳಿಗೆ
ಪರಮಶೂನ್ಯ ಶತದಡ್ಡನೊಬ್ಬನಿಂದ
ತಾವಾಗಿಯೇ ಮುಂದೆ ಬಂದು ಬರೆಸಿಕೊಂಡ
ಅಂತಹ ಮಹಾ ಏನು ಅಲ್ಲದ ಅಷ್ಟೇನೂ
ಸೊಗಸಾಗಿಲ್ಲದ ಸಾಧಾರಣ ಕವಿತೆಗಳಿಗೆ
ನನ್ನೊಳಗಡಗಿರುವ ಶ್ರೀಸಾಮಾನ್ಯಾನಲ್ಲದ ಮೌನ ಕೋಗಿಲೆಗೆ
ನೊಂದು ಬೆಂದು ಹೋದ ಭಗ್ನಪ್ರೇಮಿಗಳಿಗೆ
ವಂದೇ ಗುರೂಣಾಮ್ ಚರಣಾರವಿಂದೇ.....ಎಂಬ ಶ್ಲೋಕವನ್ನು
ಪ್ರತಿ ಮುಂಜಾವಿನಲ್ಲೂ ನನ್ನ ಪ್ರೀತಿಯ ಅಮ್ಮ ಹೇಳುವಾಗ
ಆದ ಕೇಳಿ ನಿದ್ದೆಯಿಂದೆಚ್ಚೆತ್ತುಕೊಳ್ಳುವ ನನ್ನ ಸುಪ್ತ
ಆಧ್ಯಾತ್ಮಿಕ ಪ್ರಜ್ಞೆಗೆ...................ಆಗಲೇ ಕ್ಷಣಾರ್ಧ
ಯೋಗ ನಿದ್ರೆಗೆ ಎಳೆದುಕೊಂಡಂತಾಗಿ ಮತ್ತೆ ಸ್ವಸ್ಥಾನಕ್ಕೆ
ತಂದು ಬಿಡುವ ದಾರ್ಶನಿಕತೆಯ ಆಳ ಪರಿಣಾಮಕ್ಕೆ
ಕಾಡಪಾಲಾಗಿರುವ ಕೋಗಿಲೆಗಳ ಸ್ವರಗಳನ್ನು
ನಾಡಿನಿದ್ದಕ್ಕೂ ತೇಲಿಸುವ ಹಂಸಕ್ಕೆ
ಸದಾ ಹೂನಗೆಯಾಭರಣ ಧರಿಸಿರುವ
ಹಂಸದ ಆ ನಿತ್ಯ ಮೊಗ ಸೌಂದರ್ಯ ಕೆ
ಸದಾ ನನ್ನ ಕನಸಿನಂಗಿಯ ಜೇಬಿಗೆ ಒಂದಿಷ್ಟು
ಗೊತ್ತುಗುರಿಗಳನ್ನು ಗಿರಿಯಷ್ಟು ತುಂಬಿ ಕಳಿಸುವ ಹಂ-
-ಸಹೃದಯದ ನಿಷ್ಕಲ್ಮಶ ಪೂರ್ಣಭಾವ
ನಡಿಗೆಗೆ -- ನಡುವಳಿಕೆಗೆ --
ಆ ಅಪೂರ್ವಕೆ -- ಅಪರೂಪಕೆ
ಸಂವೇದನೆಗಳನ್ನೇ ನಾಡಿಗುಣಬಡಿಸುವ
ಹಂಸದ ಆ ವಿಶಿಷ್ಟಲೇಖನಿಗೆ
ಲೇಖನಿಯ ಮೇಲೇ ಕುಳಿತು ಬರೆದದ್ದನ್ನು
ಮೊದಲು ನೋಡುವ ಅದೃಷ್ಟಾವಕಾಶ
ತನ್ನದಾಗಿಸಿಕೊಂಡ ಆ ಹಂಸಕ್ಕೆ -- ಆ ಹಂಸಕ್ಕೆ - -
ಅದರ ಮೇಲಣ ನನ್ನ ಶಾಶ್ವತ ಅಭಿಮಾನಕ್ಕೆ
*************